Sunday, 9 February 2025

*ಮಣ್ಣಿನ ಸಹಾಯವಿಲ್ಲದೆ ಬೆಳೆಯುವ ಹೈಡ್ರೋಫೋನಿಕ್ ಕೃಷಿ ವಿಧಾನ*

  


ಯಾವುದೇ ಕೃಷಿ ಮಾಡಲು ಮಣ್ಣೇ ಮುಖ್ಯ. 'ಮಣ್ಣಿಲ್ಲದೆ ಕೃಷಿ ಮಾಡಬಹುದೇ?' ಎಂಬ ಪ್ರಶ್ನೆಗೆ, 'ಹೌದು ಮಣ್ಣಿಲ್ಲದೆ ಕೃಷಿ ಮಾಡಲು ಸಾಧ್ಯ' ಎಂಬ ಉತ್ತರ ಈಗ ನಮ್ಮಲ್ಲಿದೆ. ಇತ್ತೀಚಿನ ದಿನಗಳಲ್ಲಿ ಹೈಡ್ರೋಫೋನಿಕ್ಸ್ ಎಂಬ ವಿನೂತನ ಕೃಷಿ ವಿಧಾನ ಚಾಲ್ತಿಯಲ್ಲಿದೆ. ಈ ಪದ್ಧತಿ ಕೃತಕ ಪರಿಸರದಲ್ಲಿ ನೀರು ಆಧರಿತ ಖನಿಜ ಪೋಷಕಾಂಶಗಳನ್ನು ಬಳಸಿಕೊಂಡು ಮಣ್ಣು ಇಲ್ಲದೆ ನೀರಿನ ಮೂಲಗಳಿಂದ ಸಸ್ಯಗಳನ್ನು ಬೆಳೆಸಬಹುದು. ಸಾಮಾನ್ಯವಾಗಿ ಕೆಲವು ತೋಟಗಾರಿಕಾ ಬೆಳೆಗಳು, ಸೊಪ್ಪು ತರಕಾರಿಗಳು, ಔಷಧಿಯ ಸಸ್ಯಗಳನ್ನು ಚೆನ್ನಾಗಿ ಬೆಳೆಸಬಹುದು. ಈಗ‌ ಈ ವಿಧಾನದಲ್ಲಿ ಪ್ರಾಣಿಗಳಿಗೆ ಮೇವುಗಳನ್ನು ಸಹ ಬೆಳೆಯುತ್ತಿದ್ದಾರೆ.


 *ಏನಿದು ಹೈಡ್ರೋಫೋನಿಕ್ ಕೃಷಿ ವಿಧಾನ?* 

          ಜಲ ಕೃಷಿ ಅಥವಾ ಹೈಡ್ರೋಫೋನಿಕ್ ಕೃಷಿ ಎನ್ನುವುದು ಒಂದು ತಂತ್ರಜ್ಞಾನ. ಹೈಡ್ರೋ ಎಂದರೆ ನೀರು, ಫೋನಸ್ ಎಂದರೆ ಕೆಲಸ ಮಾಡುವುದು ಎಂದರ್ಥ. ಒಟ್ಟಾರೆಯಾಗಿ, ಹೈಡ್ರೋಫೋನಿಕ್ಸ್ ಅಂದರೆ ಮಣ್ಣಿಲ್ಲದೆ ನೀರಿನಲ್ಲಿ ಕೃಷಿ ಮಾಡುವುದು ಎಂಬ ಅರ್ಥ ಕೊಡುತ್ತದೆ. ಸಸ್ಯಗಳಿಗೆ ಬೇಕಾದ ಎಲ್ಲಾ ಪೋಷಕಾಂಶವನ್ನು ನೀರಿಗೆ ಹಾಕಲಾಗುತ್ತದೆ. ಇದರಲ್ಲಿ ಬಳಸುವ ದ್ರಾವಣವನ್ನು ಅದರ ನಿರ್ದಿಷ್ಟ ಉಷ್ಣಾಂಶ ಹಾಗೂ phನ್ನು ಕಾಪಾಡಬೇಕು.

 *ವಿಧಗಳು:* 

ಜಲಕೃಷಿಯಲ್ಲಿ ಸಾಕಷ್ಟು ವಿಧಗಳಿವೆ. ಪ್ರತಿಯೊಂದು ವಿಧವು ವಿಭಿನ್ನ ಬೆಳೆ ಹಾಗೂ ಪರಿಸ್ಥಿತಿಗಳಿಗೆ ಸೂಕ್ತ ವಾಗುವಂತೆ ಬೆಳೆಸಲಾಗುತ್ತದೆ. 

 *1. Deep water culture:* ಇದರಲ್ಲಿ ಸಸ್ಯದ ಬೇರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುತ್ತದೆ. ಬೇರುಗಳು ಕೊಳೆಯಬಾರದೆಂದು ಆಮ್ಲಜನಕವನ್ನು ಕೃತಕವಾಗಿ ನೀಡಲಾಗುತ್ತದೆ.
ಲೆಟ್ಯುಸ್, ಪಾಲಕ್ ನಂತಹ ಸೊಪ್ಪು ತರಕಾರಿ, ಗಿಡಮೂಲಿಕೆಗಳನ್ನು ಈ ರೀತಿಯಲ್ಲಿ ಬೆಳೆಸಬಹುದು.

 *2. Nutrient film technique (NFT):* ಸಸ್ಯದ ಬೇರುಗಳನ್ನು  ಪೌಷ್ಟಿಕಾಂಶದ ದ್ರಾವಣದಲ್ಲಿ ಹರಿಬಿಡಲಾಗುತ್ತದೆ. ಇದರಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದ್ದು ಸಸ್ಯಗಳು ಇದರಿಂದ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುತ್ತವೆ. ಸ್ಟ್ರಾಬೆರಿ, ಪಾಲಕ್, ಗಿಡ ಮೂಲಿಕೆಗಳನ್ನು ಬೆಳೆಯಬಹುದು.

 *3. Ebb and flow(Flood and drain):* ಈ ವಿಧಾನದಲ್ಲಿ ಟ್ರೇ ಅಥವಾ ಪ್ಲೇಟ್ ನಲ್ಲಿ ಸಸ್ಯವನ್ನು ಪೌಷ್ಟಿಕಾಂಶದ ದ್ರಾವಣದಲ್ಲಿ ಇಡಲಾಗುತ್ತದೆ. ನಿರ್ದಿಷ್ಟ ಸಮಯದವರೆಗೆ ಹಾಗೆ ಇಟ್ಟು ನೀರನ್ನು ಬಸಿಯಲಾಗುವುದು. ಟೊಮೇಟೊ,ಮೆಣಸಿನಕಾಯಿ,ಸೌತೆಕಾಯಿ ಈ ವಿಧಾನದಲ್ಲಿ ಬೆಳೆಸಬಹುದು. 

 *4. Drip system:* ಪೋಷಕಾಂಶದ ದ್ರಾವಣವನ್ನು ನಿಯಂತ್ರಿತ ವ್ಯವಸ್ಥೆಯನ್ನು ಬಳಸಿಕೊಂಡು ಬೇರುಗಳ ಮೇಲೆ ತೊಟ್ಟಿಕ್ಕಲಾಗುತ್ತದೆ.

 *5. Aeroponics:* ಸಸ್ಯದ ಬೇರುಗಳನ್ನು ಗಾಳಿಗೆ ನೇತಾಡಲು ಬಿಡುತ್ತಾರೆ. ಪೋಷಕಾಂಶಗಳ ದ್ರಾವಣವನ್ನು  ಸಿಂಪಡಿಸುವ ಮೂಲಕ ಬೇರುಗಳು ಪೋಷಕಾಂಶಗಳನ್ನು ಪಡೆಯುತ್ತವೆ.

 *6. Wick system:* ಈ ವಿಧಾನದಲ್ಲಿ ಸಣ್ಣ ದಾರವನ್ನು ಪೋಷಕಾಂಶಗಳ ದ್ರಾವಣಕ್ಕೆ ಹರಿಬಿಟ್ಟಾಗ ಇದು ಗಿಡಕ್ಕೆ ಬೇಕಾದಷ್ಟು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. 

 *ಜಲಕೃಷಿಯ ಪ್ರಯೋಜನಗಳು;* 

ಜಲ ಕೃಷಿಯಲ್ಲಿ ಸಸಿಗಳ ಅರ್ಧ ಬೇರುಗಳು ನೀರಿನಲ್ಲಿ ಮುಳುಗಿದ್ದು, ಅದೇ ನೀರಿಗೆ ಪೋಷಕಾಂಶಗಳನ್ನು ಹಾಕುತ್ತಾರೆ. ಬೇಕಾದಷ್ಟು ಮಾತ್ರ ಹೀರಿಕೊಂಡು ತುಂಬಾ ವೇಗವಾಗಿ ಬೆಳೆಯಲು ಆರಂಭಿಸುತ್ತದೆ. ಹಾಗಾಗಿ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭಗಳಿಸಲು ಸಾಧ್ಯವಿದೆ. 

ಜಲ ಕೃಷಿ ಅಂತ ಅಂದ ತಕ್ಷಣ ಹೆಚ್ಚು ನೀರಿನ ಅವಶ್ಯಕತೆ ಇದೆ ಅಂತ ಅಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಕೃಷಿ ಜಾಗ ಕಮ್ಮಿ ಇದ್ದಾಗ ತಮ್ಮ ಮನೆಯ ಟೆರೇಸ್ ಮೇಲೆ ಟ್ಯಾಂಕ್ ನೀರು ಬಳಸಿ ಕೃಷಿ ಮಾಡುವವರಿದ್ದಾರೆ. ಈ ಕೃಷಿ ವಿಧಾನದಲ್ಲಿ ನೀರಿನ ಖರ್ಚು ಕೂಡ ಕಡಿಮೆ ಇರುತ್ತದೆ. 

ಹೈಡ್ರೊಫೋನಿಕ್ಸ್ ಕ್ರಷಿಯಲ್ಲಿ ಮಣ್ಣಿನ ಬಳಕೆ ಇಲ್ಲದಿರುವುದರಿಂದ ಕಳೆ ಸಮಸ್ಯೆ ಇರುವುದಿಲ್ಲ. ಬೆಳೆ ಹಾಳು ಮಾಡುವ ಕೀಟಗಳ ಸಮಸ್ಯೆ ಕೂಡ ಇರೋದಿಲ್ಲ. ಹಾಗಾಗಿ, ಉತ್ತಮ ದರ್ಜೆಯ ಬೆಳೆಗಳು ಹೆಚ್ಚು ಇಳುವರಿಯೊಂದಿಗೆ ಸಿಗುತ್ತದೆ. 

ಹೈಡ್ರೋಫೋನಿಕ್ಸ್ ಕೃಷಿಯಲ್ಲಿ ಪಾಲಿಹೌಸ್‌ಗಳ ಬಳಕೆಯಿದ್ದು, ರೋಗಗಳಿಂದ ರಕ್ಷಣೆ ಸಿಗುತ್ತದೆ. ಜೊತೆಗೆ ಕೀಟನಾಶಕ ಬಳಸುವುದು ಕೂಡ ತಪ್ಪುತ್ತದೆ. 

ಜಲ ಕೃಷಿಯನ್ನು ಅತ್ಯಂತ ಕಡಿಮೆ ಜಾಗದಲ್ಲಿ ಮಾಡಿ ಅದಕ್ಕಿಂತ  ದುಪಟ್ಟು ಆದಾಯ ಗಳಿಸಬಹುದು.
 
ಈ ಕೃಷಿ ವಿಧಾನದಲ್ಲಿ ಬಿಸಿಲಿನಲ್ಲಿ ಇಳಿದು ಇಡೀ ದಿನ ಕೆಲಸ ಮಾಡಬೇಕೆಂದಿಲ್ಲ. ಜೊತೆಗೆ ಜಾಸ್ತಿ ಕೂಲಿಗಳ ಅಥವಾ ಜನರ ಅವಶ್ಯಕತೆ ಕೂಡ ಇಲ್ಲ.

ಸೊಪ್ಪು, ತರಕಾರಿಗಳು, ಗಿಡಮೂಲಿಕೆಗಳು ಹಾಗೂ ಕೆಲವೊಂದು ಸಣ್ಣ ಬೇರಿನ ಸಸ್ಯಗಳನ್ನು ಹೈಡ್ರೋಫೋನಿಕ್ ವಿಧಾನದಲ್ಲಿ ಬೆಳೆದರೆ ಹೆಚ್ಚು ಲಾಭಗಳಿಸಬಹುದು.

 *ಹೈಡ್ರೋಫಾನಿಕ್ಸ್  ಕೃಷಿಯ ಸಮಸ್ಯೆಗಳು;* 

ಹೆಚ್ಚು ಆರಂಭಿಕ ಖರ್ಚು: ಹೈಡ್ರೋಫೋನಿಕ್ಸ್ ಕೃಷಿಯ ಸ್ಥಾವರವನ್ನು ಸ್ಥಾಪಿಸಲು ಅದಕ್ಕೆ ಬೇಕಾದ ಉಪಕರಣಗಳು ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಖರ್ಚು ತಗಲುತ್ತದೆ. ಜೊತೆಗೆ, ಪಾಲಿಹೌಸ್ ಕೂಡ ಸ್ಥಾಪಿಸಬೇಕಾಗುತ್ತದೆ. ಅದಕ್ಕೂ ಹೆಚ್ಚು ಖರ್ಚಿದೆ. 

ರೈತರ ಶ್ರದ್ಧೆ, ಸಮಯ ತುಂಬಾ ಅವಶ್ಯ. ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶಗಳನ್ನು ನೀಡಬೇಕು. ಹಾಗಾಗಿ, ನಿರಂತರ ಮೇಲ್ವಿಚಾರಣೆ ಅಗತ್ಯ.

ಹೈಡ್ರೋಫೋನಿಕ್ಸ್‌ನಲ್ಲಿ ಗಿಡಗಳು ಕೃತಕ ವಾತಾವರಣದಲ್ಲಿ ಬೆಳೆಯುವುದರಿಂದ ಅದನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿರಬೇಕಾಗುತ್ತದೆ.  

ನಿರಂತರ ವಿದ್ಯುತ್ ಸರಬರಾಜು ಬೇಕು. ಸಸ್ಯಗಳಿಗೆ ನಿರಂತರ ಪೋಷಕಾಂಶಗಳ ಸರಬರಾಜು ಹಾಗೂ ಕಳೆ ವಿಲೇವಾರಿ ಮಾಡಬೇಕಾಗಿರುವುದರಿಂದ ನಿರಂತರ ವಿದ್ಯುತ್ ಅವಶ್ಯಕತೆ ಇದೆ. 

ಇದು ನಿರ್ದಿಷ್ಟ ಬೆಳೆಗಳಿಗೆ ಸೀಮಿತವಾಗಿದೆ. ಸೊಪ್ಪು, ತರಕಾರಿ, ಗಿಡ ಮೂಲಿಕೆಗಳನ್ನು ಚೆನ್ನಾಗಿ ಬೆಳೆಯಲಾಗುತ್ತದೆ. ಆದರೆ, ಆಳವಾಗಿ ಬೇರೂರಬಲ್ಲ ಸಸ್ಯಗಳನ್ನು ಬೆಳೆಯಲು ಸಾಧ್ಯವಿಲ್ಲ.

ನೀರಿನಿಂದ ಹರಡುವ ರೋಗಗಳ ಅಪಾಯವಿರುತ್ತದೆ.

 ಜನಸಂಖ್ಯೆ ಹೆಚ್ಚಿದಂತೆ ಹಾಗೂ ಕೃಷಿಯೋಗ್ಯ ಭೂಮಿ ಕಡಿಮೆ ಇದ್ದಾಗ, ಹೈಡ್ರೋಪೋನಿಕ್ ಕೃಷಿಯು ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.





ಡಾ|| ಗ್ರೀಷ್ಮಾ ಗೌಡ ಆರ್ನೋಜಿ BNYS,Msc(Clinical Nutrition and dietetics)
ವೈದ್ಯರು 
ಸಂಪೂರ್ಣ ಪಾಲಿಕ್ಲಿನಿಕ್ ಕಡಬ