Wednesday, 25 September 2024
*ಆರೋಗ್ಯದ ದೃಷ್ಟಿಯಲ್ಲಿ ಸಾವಯವ ಕೃಷಿ ಪದ್ಧತಿ*-ಡಾ || ಗ್ರೀಷ್ಮಾ ಗೌಡ ಆರ್ನೋಜಿ
ಡಾ || ಗ್ರೀಷ್ಮಾ ಗೌಡ ಆರ್ನೋಜಿ
ವೈದ್ಯರು,ಸಂಪೂರ್ಣ ಪಾಲಿಕ್ಲಿನಿಕ್ ಕಡಬ
'ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ', ಎಂಬ ಮಾತಿದೆ.ಅದರಂತೆ, ನಾವು ಹೇಗೆ ನಮ್ಮ ದೇಹವನ್ನು ನೋಡಿಕೊಳ್ಳುತ್ತೇವೆಯೋ,ಹಾಗೆ ನಮಗೆ ಬರುವ ರೋಗಗಳನ್ನು ತಡೆಯ ಬಹುದು.ಸರಿಯಾದ ಆಹಾರ ಪದ್ಧತಿ, ವ್ಯಾಯಾಮ,ವಿಶ್ರಾಂತಿ,ನಿದ್ದೆ,ಒಳ್ಳೆಯ ಆಚಾರ-ವಿಚಾರಗಳನ್ನು ಪಾಲಿಸುವುದು ಇವೆಲ್ಲ ಸದೃಢ ಆರೋಗ್ಯಕ್ಕೆ ಸುಲಭ ಮಾರ್ಗ.ಉತ್ತಮ ಆಹಾರ ಪದ್ಧತಿ ಅಂದಾಗ ಬರಿ ಅಡುಗೆ ಮನೆಗೆ ಸಂಬಂಧ ಪಟ್ಟಿದ್ದಲ್ಲ.ಆಹಾರ ಪದಾರ್ಥಗಳು ಎಲ್ಲಿಂದ ಬಂತು ಹಾಗೂ ಅವುಗಳನ್ನು ಹೇಗೆ ಬೆಳೆಸಲಾಯಿತು ಎಂಬುದರ ಬಗ್ಗೆ ಯೋಚಿಸಬೇಕು.
ರೈತರು ಉತ್ತಮ ಇಳುವರಿಗೆ ರಾಸಾಯನಿಕ ರಸ ಗೊಬ್ಬರಗಳು, ಕಳೆನಾಶಕ ,ವಿಷಪೂರಿತ ಕೀಟನಾಶಕಗಳನ್ನು ಬಳಸುತ್ತಾರೆ.ಇದರಿಂದಾಗಿ, ಮಾರಣಾಂತಿಕ ರೋಗಗಳು ಬರುತ್ತವೆ.
ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸಲು ನೈಟ್ರೋಜನ್, ಪಾಸ್ಫರಸ್, ಫೋಟೋಸ್ ಗಳನ್ನು ಹೊಂದಿದ ರಾಸಾಯನಿಕ ರಸಗೊಬ್ಬರಗಳನ್ನು ಬಳಸುತ್ತಾರೆ.ಇದು ಕುಡಿಯುವ ನೀರನ್ನು ಕಲುಷಿತಗೊಳಿಸುತ್ತದೆ. ಜೊತೆಗೆ,ನೀರಲ್ಲಿದ್ದ ಜಲಚರಗಳನ್ನು ನಾಶ ಮಾಡಿ ವಿಷಪೂರಿತ ಸಸ್ಯಗಳು ಬೆಳೆಯುವಂತೆ ಮಾಡುತ್ತದೆ.ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಕೀಟನಾಶಕಗಳು ಕೃಷಿಗೆ ಬರುವ ಹುಳ-ಉಪ್ಪಟೆಗಳನ್ನು ನಾಶಮಾಡುತ್ತದೆ.ಅದೇ ಕೀಟನಾಶಕ ಗಳನ್ನು ಬಳಸಿದ ಹಣ್ಣು,ತರಕಾರಿಗಳನ್ನು ನಾವು ತಿಂದರೆ ಕ್ಯಾನ್ಸರ್, ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳು,ಬಂಜೆತನ, ಬೆಳವಣಿಗೆ ಕುಂಟಿತಗೊಳ್ಳುವ ಸಮಸ್ಯೆಗಳು ಉಂಟಾಗುತ್ತದೆ.
ಈಗ ನಾನಾ ರೀತಿಯ ಕಳೆ ನಾಶಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದನ್ನು ಸಿಂಪಡಿಸಿದರೆ ಎರಡು ದಿನದಲ್ಲಿ ಹುಲ್ಲು ಸುಟ್ಟು ಹೋಗುತ್ತದೆ.ಇದರಲ್ಲಿ ಬಳಸುವ ಗ್ಯೆಫಾಸೆಟ್ ಎಂಬ ರಾಸಾಯನಿಕ ವಸ್ತು ಕ್ಯಾನ್ಸರ್ ಕಾರಕವಾಗಿದೆ.ಜೊತೆಗೆ,ದೇಹದ ಹಾರ್ಮೋನ್ ಸಮಸ್ಯೆ,ಬಂಜೆತನ,ಬುದ್ಧಿಮಾಂದ್ಯತೆ, ಬೆಳವಣಿಗೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಇದನ್ನೆಲ್ಲ ನೋಡಿದಾಗ ನಮಗೆ ಅನಿಸುವುದು ಒಂದೆ, ನಾವು ದಿನನಿತ್ಯ ಸೇವಿಸುವುದು ವಿಷಪೂರಿತ ಆಹಾರವೇ?. ಹೇಗೆ ನಾವು ಇದರಿಂದ ಹೊರಬಂದು ಸ್ವಚ್ಛ ಆಹಾರ ಪದಾರ್ಥಗಳನ್ನು ಸೇವಿಸುವ ಎಂದು.
ಅದಕ್ಕೆ ಇರುವುದು ಒಂದೇ ದಾರಿ ಸಾವಯವ ಕೃಷಿ.
ಸಾವಯವ ಕೃಷಿ ಎಂದರೆ ಸುಸ್ಥಿರತೆ, ಜೀವವೈವಿಧ್ಯ ಮತ್ತು ಪರಿಸರ ಸಮತೋಲನಕ್ಕೆ ಒತ್ತು ನೀಡುವ ಕೃಷಿ ವಿಧಾನ. ಪ್ರಾಣಿಗಳ ಗೊಬ್ಬರ,ದನದ ಹಟ್ಟಿಗೊಬ್ಬರ,ಜೀವಾಮೃತ ಅಥವಾ ನೈಸರ್ಗಿಕ ತ್ಯಾಜ್ಯಗಳನ್ನು ಉಪಯೋಗಿಸಿ ಮಾಡುವ ಕೃಷಿ ಪದ್ಧತಿ.ಇದರಲ್ಲಿ,ಜೈವಿಕ ಕೀಟ ನಿಯಂತ್ರಣ,ಸರದಿ ಬೆಳೆ,ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಹೆಚ್ಚು ಕಾಳಜಿ ವಹಿಸುತ್ತದೆ.
*ನಮ್ಮ ಆರೋಗ್ಯದ ಮೇಲೆ ಸಾವಯವ ಕೃಷಿಯ ಆಹಾರದ ಪ್ರಯೋಜನಗಳೇನು*
* ಪ್ರತಿಯೊಬ್ಬರ ಮನೆಯ ಸುತ್ತಲು ಒಂದು ಸಣ್ಣ ಕೈತೋಟ ಮಾಡಿದರೆ, ತಮ್ಮ ದಿನನಿತ್ಯಕ್ಕೆ ಬೇಕಾದ ತರಕಾರಿ, ಸೊಪ್ಪು, ಹಣ್ಣು-ಹಂಪಲುಗಳನ್ನು ತಾವೇ ಬೆಳೆಸಬಹುದು. ಈ ರೀತಿ ಬೆಳೆದ ಆಹಾರ ಉತ್ಪನ್ನಗಳಲ್ಲಿ ದೇಹಕ್ಕೆ ಬೇಕಾದ ಜೀವ ಸತ್ವಗಳು, ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯುತ್ತದೆ.ಇದು, ದೇಹದಲ್ಲಿ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ ಹಾಗೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.
* ಸಾವಯವ ಕೃಷಿಯಲ್ಲಿ ಯಾವುದೇ ಹಾರ್ಮೋನ್ ಗಳು ಅಥವಾ ರಾಸಾಯನಿಕ ಗಳನ್ನು ಬಳಸದ ಕಾರಣ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ
* ಸಾವಯವ ಕೃಷಿಯಿಂದ ಬೆಳೆದ ಆಹಾರ ಉತ್ಪನ್ನ ಗಟ್ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವುದರಿಂದ ಜೀರ್ಣಾಂಗವ್ಯೂಹದ ಆರೋಗ್ಯ ವನ್ನು ಕಾಪಾಡುತ್ತದೆ.
* ಸಾವಯವ ಕೃಷಿಯಿಂದ ನಮಗೆ ಬೇಕಾದ ಋತುಕಾಲಿಕ ಆಹಾರಗಳು ದೊರೆಯುತ್ತವೆ. ಇದು ನಮಗೆ ಆ ಋತುವಿನ ಆರೋಗ್ಯವನ್ನು ಕಾಪಾಡುತ್ತದೆ.ಜೊತೆಗೆ,ಸ್ಥಾನಿಕ ಆಹಾರ ಉತ್ಪನ್ನ ಸಿಗುತ್ತದೆ.ಇದು,ನಮ್ಮ ದೇಹದಲ್ಲಿ ಕೊರತೆ ಇರುವ ಜೀವಾಂಶವನ್ನು ಒದಗಿಸುತ್ತದೆ.
* ನೈಸರ್ಗಿಕ ಕೃಷಿಯಲ್ಲಿ ದನ-ಕರುಗಳನ್ನು ಗುಡ್ಡೆಗೆ ಮೇಯಲು ಬಿಡುವುದರಿಂದ ಆ ದನದ ಹಾಲು, ಸಂಸ್ಕರಿಸಿದ ಹಾಲಿನಲ್ಲಿ ಕೊರತೆ ಇರುವ ವಿಟಮಿನ್ ಡಿ ಅಂಶವನ್ನು ಒದಗಿಸುತ್ತದೆ.
ಸಾವಯವ ಕೃಷಿ ಉತ್ಪನ್ನಗಳು ಆರೋಗ್ಯ ದೃಷ್ಟಿಯಿಂದ ಎಷ್ಟು ಉಪಯುಕ್ತವೋ, ಈ ರೀತಿಯ ಕೃಷಿ ಪದ್ಧತಿ ಪರಿಸರದ ಸಮತೋಲನಕ್ಕೆ ಅಷ್ಟೇ ಉಪಕಾರಿಯಾಗಿದೆ. ಹಾಗಾಗಿ,ಆದಷ್ಟು ನೈಸರ್ಗಿಕ ಕೃಷಿ ಪದ್ಧತಿಯನ್ನು ಪಾಲಿಸೋಣ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಯುಕ್ತ ಕೃಷಿ ಭೂಮಿಯನ್ನು ಒದಗಿಸೋಣ.
Subscribe to:
Post Comments (Atom)
No comments:
Post a Comment