Thursday, 12 September 2024

ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭ-ರೋಟರಿ ಕ್ಲಬ್ ಸುಬ್ರಮಣ್ಯ ದಿಂದ

 ಬರಹ :ಷಣ್ಮುಖ ಕಟ್ಟ,ಅಗ್ರಿಕಲ್ಚರ್ ಡೆಸ್ಕ್ 



ನಿನ್ನೆ (12 .9 .24) ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭಕ್ಕೆ ಹೋಗಿದ್ದೆ .ರೋಟರಿ ಕ್ಲಬ್ ಸುಬ್ರಮಣ್ಯ ಮತ್ತು ಇತರ ಸಂಘ ಸಂಸ್ಥೆಗಳ ಮುಂದಾಳುವತ್ವ ದಲ್ಲಿ ನಡೆದಿತ್ತು .ಸಂಪನ್ಮೂಲ ವಕ್ತಿ ಯಾಗಿ ಶ್ರೀ ಕೆ ಮಹೇಶ್ shenoy ರವರು ದೂರದ ಕಟಪಾಡಿ ಉಡುಪಿನಿಂದ ಬಂದಿದ್ದರು .ಸುಬ್ರಮಣ್ಯ ಕೆ. ಸ್. ಸ್. ಡಿಗ್ರಿ ಕಾಲೇಜು ವಿದ್ಯಾರ್ಥಿ ಗಳು ಸ್ವಯಂಸೇವಕರಾಗಿ ಪಾಲ್ಗೊಂಡರು .ಮಹೇಶ್ shenoy ರವರು ಮಿಯಾವಕಿ ಅರಣ್ಯ ತಜ್ಞ ರಾಗಿದ್ದು ಕರ್ನಾಟಕ ದಾದ್ಯಂತ ಹಲವಾರು ಮಿಯಾವಕಿ ಕಾಡುಗಳನ್ನು ನಿರ್ಮಿಸಿದ್ದಾರೆ .ಮಹೇಶ್ shenoy ರವರ ಪರಿಸರ ದ ಬಗ್ಗೆ ಭಾಷಣ ಕೇಳಿ ಮೈ ರೋಮಾಂಚನ ಆಯಿತು .ಮಹೇಶ್ shenoy ರವರು online ನಲ್ಲಿ "ಮಾರ್ನಿಂಗ್ ಮಿರಾಕಲ್ " ಎಂಬ ಕಾನ್ಸೆಪ್ಟ್ ನಲ್ಲಿ ಕ್ಲಾಸ್ ಕೊಡುತಾರೆ . ಬೆಳಿಗ್ಗೆ ಬೇಗ ಬ್ರಾಹ್ಮೀ ಮುಹೂರ್ತ ದಲ್ಲಿ ಎದ್ದೇಳಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದು ಇವರ ಕಾನ್ಸೆಪ್ಟ್ .ಇವರ ತರಗತಿ ಇಂದ ಪ್ರೇರಿಪಿತರಾಗಿ ಹಲವಾರು ಜೀವನದಲ್ಲಿ ಸಾಧನೆ ಮಾಡಿದ್ದಾರೆ .ಇಂತಹ ವ್ಯಕ್ತಿಯ ಪರಿಚಯ ವಾದದ್ದು ನನ್ನ ಸೌಭಾಗ್ಯ .ಸುಬ್ರಮಣ್ಯ ರೋಟರಿ ಕ್ಲಬ್ ನ ಇಂತಹ ಪರಿಸರ ಕಾಳಜಿಯ ಕೆಲಸ ಅಭಿನಂದನೆಗೆ ಅರ್ಹ .ಯಾವುದೇ ಪ್ರಚಾರ ಬಯಸದೆ ಸುಬ್ರಮಣ್ಯ ರೋಟರಿ ಕ್ಲಬ್ ಇಂತಹ ಹಲವಾರು ಸಮಾಜ ಕಾರ್ಯ ಕೆಲಸಗಳನ್ನು ಮಾಡಿದೆ ಮತ್ತು ಮಾಡುತ್ತಿದೆ ."ಮಿಯಾವಕಿ " ಬಗ್ಗೆ ಮಾಹಿತಿ ಮತ್ತು ನಾನ ುಕೂಡಾ ಗಿಡನೆಡುವ ಕಾರ್ಯ ದಲ್ಲಿ ಪಾಲ್ಗೊಂಡದ್ದು ನೆನಪಿನಲ್ಲಿ ಅಚ್ಚಳಿಯದಂತೆ ಇರುವbಸಂತೋಷದ ವಿಷಯ -------------------------------------------------------------------------------------------

 ವಿಷಯ .ಜಪಾನ್‌ ಮೂಲದ ʻಮಿಯಾವಾಕಿ ಫಾರೆಸ್ಟ್‌ʼ(From Facebook)

✍🏻 ನಾಗೇಶ್ ಹೆಗ್ಡೆ 

ಇಪ್ಪತ್ತು ವರ್ಷಗಳಲ್ಲಿ ಬೆಳೆಯುವಷ್ಟು ಅರಣ್ಯವನ್ನು ಐದೇ ವರ್ಷಗಳಲ್ಲಿ, ಅಷ್ಟೇ ದಟ್ಟವಾಗಿ  ನಿರ್ಮಿಸುವ ಸಾಧನೆಗೆ ʻಮಿಯಾವಾಕಿ ವಿಧಾನʼ ಎನ್ನುತ್ತಾರೆ.  ಚಿಕ್ಕ ಪುಟ್ಟ (10x40ಅಡಿ) ವಿಸ್ತೀರ್ಣದಲ್ಲೂ ಇಂಥ ಅರಣ್ಯಗಳನ್ನು ಬೆಳೆಸಬಹುದು.
ಇಂದು, ಮಾರ್ಚ್‌ 21 ವಿಶ್ವ ಅರಣ್ಯ ದಿನ. ಹಿಂದೆಂದೂ ಕಾಣದಷ್ಟು ತೀವ್ರ ಮಟ್ಟದಲ್ಲಿ ಭೂಮಿ 2023ರಲ್ಲಿ ಬಿಸಿಯಾಗಿದೆ ಎಂದು ವಿಶ್ವ ಪವನವಿಜ್ಞಾನ ಸಂಸ್ಥೆ ಹೇಳಿದೆ. ತಾಪಮಾನದ ಈ ಏರಿಕೆ ಈ ವರ್ಷ ಇನ್ನೂ ಹೆಚ್ಚುತ್ತದೆ ಎಂತಲೂ ವಿಜ್ಞಾನಿಗಳು ಹೇಳುತ್ತಿದ್ದಾರೆ. 
ಅದನ್ನು ತಡೆಯಲು ನಮಗೆ ಸದ್ಯದಲ್ಲಂತೂ ಸಾಧ್ಯವಿಲ್ಲ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ ತ್ವರಿತವಾಗಿ ದಟ್ಟ ಅರಣ್ಯವನ್ನು ನಿರ್ಮಿಸಿಕೊಂಡರೆ ಅಷ್ಟರ ಮಟ್ಟಿಗೆ ನಮ್ಮ ಸಮೀಪ ತಂಪನ್ನು ಸೃಷ್ಟಿಸಬಹುದು. ಆಘಾತವನ್ನು ತಗ್ಗಿಸಿಕೊಳ್ಳಬಹುದು. ತಮ್ಮದಲ್ಲದ ತಪ್ಪಿನಿಂದ ಸಂಕಟ ಅನುಭವಿಸಬೇಕಾದ ಪ್ರಾಣಿಪಕ್ಷಿಗಳ ಸಂತತಿಯೂ ಆಶ್ರಯ ಪಡೆಯಬಹುದು.  ಪ್ರಕೃತಿ ನಮಗೆ ಅಷ್ಟು ಕಾಲಾವಕಾಶವನ್ನು ನೀಡಿದೆ.
ಮಿಯಾವಾಕಿ ಅರಣ್ಯ ನಿರ್ಮಾಣದ ಕ್ರಮಗಳು ಹೀಗಿವೆ:
ಮೊದಲು ನಿಮ್ಮ ಊರಿನ ಆಸುಪಾಸಿನ ಸಹಜ ನಿಸರ್ಗದಲ್ಲಿ ಯಾವ ಯಾವ ಗಿಡಮರ ಬೆಳೆಯುತ್ತವೆ ಎಂಬುದನ್ನು ಪಟ್ಟಿ ಮಾಡಿಕೊಳ್ಳಿ.
ಅವುಗಳಲ್ಲಿ ಎತ್ತರಕ್ಕೆ ಬೆಳೆಯುವ ಮರಗಳು ಯಾವವು, ಮಧ್ಯಮ ಎತ್ತರಕ್ಕೆ ಬೆಳೆಯುವುದು ಯಾವವು ಮತ್ತು ಆಳೆತ್ತರಕ್ಕೆ ಮಾತ್ರ ಬೆಳೆಯುವ ಸಸ್ಯಗಳು ಯಾವವು ಎಂಬುದನ್ನು ಗಮನಿಸಿ. ಅವೆಲ್ಲವುಗಳ ಬೀಜಗಳನ್ನು (ಇಲ್ಲವೆ ಅಂಕುರಗಳನ್ನು ಅಥವಾ ಗಡ್ಡೆ/ಟೊಂಗೆಗಳನ್ನು) ಶೇಖರಿಸಿ ಇಟ್ಟುಕೊಳ್ಳಿ.
ಮುಂದಿನ ಹಂತದಲ್ಲಿ (ಇದು ತುಸು ಕಷ್ಟ) ನೀವು ಅರಣ್ಯ ಬೆಳೆಸಲು ಆಯ್ಕೆ ಮಾಡಿಕೊಂಡ ತಾಣದಲ್ಲಿ ಮೂರು/ನಾಲ್ಕು ಅಡಿ ಆಳವಾದ ಗುಂಡಿಯನ್ನು ತೋಡಿರಿ. ಅಥವಾ ಜೆಸಿಬಿ ಮೂಲಕ ಉದ್ದನ್ನ ಕಂದಕವನ್ನು ತೋಡಿ. ಅದರಲ್ಲಿ ಕಳಿತ ಗೊಬ್ಬರ, ತರಗೆಲೆ, ಒಣಹುಲ್ಲು ಅಥವಾ ಕೊಕೊಪಿತ್‌ನಂಥ ನಾರುಗಳನ್ನೂ  ತುಸು ಮಣ್ಣನ್ನೂ ಸೇರಿಸಿ ತುಂಬಿರಿ. 
ಅದರಲ್ಲಿ ಅತ್ಯಂತ ಸಾಂದ್ರವಾಗಿ, ಅಂದರೆ ಒಂದೊಂದು ಮೀಟರಿಗೆ ಎರಡು ಮೂರು  ಸಸಿಗಳು ಚಿಗುರಿ ಏಳುವಂತೆ ವ್ಯವಸ್ಥೆ ಮಾಡಿ. ಅಂದರೆ ಬೀಜ/ಗಡ್ಡೆ/ ಮೊಳಕೆಗಳನ್ನು ಊರಿ, ಮುಚ್ಚಿ, ಆರಂಭದಲ್ಲಿ ನೀರುಣ್ಣಿಸಿ. 
ಮಳೆಗಾಲದ ಪ್ರಾರಂಭದಲ್ಲಿ ಇದನ್ನು ಮಾಡುವುದು ಒಳ್ಳೆಯದು. ಅಥವಾ ಸಸ್ಯಗಳು ಚಿಗುರಿ ಏರುವವರೆಗೂ ನೀರುಣ್ಣಿಸಬೇಕು. ಒಂದೇ ವರ್ಗದ  (ಎತ್ತರ, ಮಧ್ಯಮ ಮತ್ತು ಗಿಡ್ಡ) ಸಸ್ಯಗಳು ಒಂದರ ಪಕ್ಕ ಒಂದು ಬಾರದಂತೆ, ಮಧ್ಯೆ ಮಧ್ಯೆ ವಿಭಿನ್ನ ಎತ್ತರದವು  ಏಳುವಂತೆ ಬೀಜ ನಾಟಿ ಮಾಡಿ.
ಗೊಬ್ಬರ ಮತ್ತು ಮೆದುಮಣ್ಣಿನ ಅಂಶಗಳು ಇರುವುದರಿಂದ ಅವೆಲ್ಲ ಸಸ್ಯಗಳೂ ಆಳಕ್ಕೆ ಬೇರುಗಳನ್ನು ಇಳಿಸುತ್ತ ತ್ವರಿತವಾಗಿ ಮೇಲೇರುತ್ತವೆ. ಸೂರ್ಯನ ಬೆಳಕಿಗಾಗಿ ಪೈಪೋಟಿ ಇರುವುದರಿಂದ ಹಲಸು, ಮಾವು, ನಂದಿ, ಹೊನ್ನೆಯಂಥ ಸಸ್ಯಗಳೂ ನೇರವಾಗಿ ತ್ವರಿತವಾಗಿ ಮೇಲೇಳುತ್ತವೆ. ತಕ್ಷಣ ಮೇಲಕ್ಕೆ ಏಳದಂತೆ ಕಂಡರೂ ಚಿಂತೆಯಿಲ್ಲ. ಅವು ಆಳಕ್ಕೆ ಬೇರುಗಳನ್ನು ಇಳಿಸುತ್ತಿರುತ್ತವೆ. 
ಮೂರೇ ತಿಂಗಳಲ್ಲಿ ಒಂದು ಮೀಟರ್‌ಗಿಂತ ಆಳಕ್ಕೆ ಬೇರು ಇಳಿದಿರುತ್ತವೆ. ಮಣ್ಣು ಸಡಿಲ ಇರುವುದರಿಂದ ಅವಕ್ಕೆ ಉಸಿರಾಟವೂ ಸಲೀಸಾಗಿರುತ್ತದೆ. ಎಲ್ಲವೂ ಶೀಘ್ರ ಮೇಲೇಳುತ್ತವೆ. ಮೊದಲ ಮಳೆಗೇ ಅಣಬೆಗಳು ಏಳುವುದನ್ನು ಕಾಣುತ್ತೀರಿ. ಅದರ ಅರ್ಥ ಅಣಬೆಯ ಬೇರುಗಳ ಜಾಲ ನೆಲದಾಳದಲ್ಲಿ ಹಬ್ಬಿದೆ ಅಂತ. ಇನ್ನು ಚಿಂತೆ ಇಲ್ಲ.  ಮಳೆ ಸಾಕಷ್ಟು ಇಲ್ಲದಲ್ಲಿ ನೀರು ಕೊಡುತ್ತಿರಿ. ತರಗೆಲೆಗಳ ದಟ್ಟ ಮುಚ್ಚಿಗೆ ಇರಲಿ.  ಮೊದಲ ಎರಡು ಮೂರು ವರ್ಷ ಅಷ್ಟೆ. ಆಮೇಲೆ ಏನನ್ನೂ ಕೊಡಬೇಕಾಗಿಲ್ಲ.
ಮೊದಲ ಎರಡು ಮೂರು ವರ್ಷ ನೆಲಮಟ್ಟದಲ್ಲಿ ಸಾಕಷ್ಟು ಕಳೆ ಬೆಳೆಯಬಹುದು. ಆಗೆಲ್ಲ ಅವುಗಳನ್ನು ಕಿತ್ತು ಅಲ್ಲಲ್ಲೇ ಹರವುತ್ತಿರಿ. ಗಿಡಗಳು ಎತ್ತರಕ್ಕೆ ಬೆಳೆದು ದಟ್ಟ ನೆರಳು ಆವರಿಸುವುದರಿಂದ ಕಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ. ಪ್ರಾಣಿಪಕ್ಷಿಗಳು, ಕೀಟಪತಂಗಗಳು,  ಇರುವೆ ಗೆದ್ದಲುಗಳು, ಎರೆಹುಳುಗಳು ಅಲ್ಲಿಗೆ ಆಶ್ರಯಕ್ಕೆ ಬಂದು ಮುಂದೆ ಅವೇ ಅರಣ್ಯ ನಿರ್ವಹಣೆ ಮಾಡುತ್ತವೆ. 
ಸಹಜ ನಿಸರ್ಗದಲ್ಲಿ ನೂರು ವರ್ಷಗಳಲ್ಲಿ ಬೆಳೆಯುವ ಅರಣ್ಯವನ್ನು ನಮ್ಮ ಯತ್ನದಿಂದ ಹತ್ತೇ ವರ್ಷಗಳಲ್ಲಿ ನಿರ್ಮಿಸಬಹುದು. ಏನನ್ನೂ ಬೆಳೆಸಲಾಗದಂಥ ದಟ್ಟ ದುಸ್ಥಿತಿಯ ತಾಣದಲ್ಲೂ ಇಂಥ ಅರಣ್ಯವನ್ನು ಬೆಳೆಸಬಹುದು. 
ಮಣ್ಣಿನಲ್ಲಿ ಸತ್ವ ಏನೇನೂ ಇಲ್ಲದಿದ್ದರೂ ಕ್ರಮೇಣ ನೀವು ಇಟ್ಟ ಮುಚ್ಚಿಗೆಯಲ್ಲೇ ಸೂಕ್ಷ್ಮಾಣುಗಳು ಸಸ್ಯಗಳಿಗೆ ಪೋಷಣೆ ನೀಡುತ್ತವೆ. 
ಅರಣ್ಯ ಬೆಳೆದಂತೆಲ್ಲ ಎಲೆಗಳಿಂದ ಹೊಮ್ಮುವ ತೇವಾಂಶ ಆಕಾಶಕ್ಕೆ ಹೋಗುವುದಿಲ್ಲ. ಅಲ್ಲಲ್ಲೇ ತಂಪಿನ ವಾತಾವರಣದಲ್ಲಿ ಇಬ್ಬನಿ ರೂಪದಲ್ಲಿ ಬೀಳುತ್ತಿರುತ್ತದೆ. 
ಜಪಾನಿನ ಅಕಿರಾ ಮಿಯಾವಾಕಿ ಎಂಬ ಸಸ್ಯವಿಜ್ಞಾನಿ 1970ರಲ್ಲಿ ರೂಢಿಗೆ ತಂದ ಈ ವಿಧಾನ ಪೂರ್ವ ಏಷ್ಯದಲ್ಲಿ ತುಂಬ ಆಕರ್ಷಣೀಯವಾಗಿ ಬೆಳೆದವು. ಬೆಂಗಳೂರಿನ ಬಳಿ ಇರುವ ಟೊಯೊಟಾ ಕಿರ್ಲೊಸ್ಕರ್‌ ಕಂಪನಿಯ ಆವರಣದಲ್ಲಿ ಆತನ ಸಲಹೆಯ ಪ್ರಕಾರ ಮಾದರಿ ಅರಣ್ಯವನ್ನು ಬೆಳೆಸಲಾಯಿತು. ಆ ದಿನಗಳಲ್ಲಿ ಮಿಯಾವಾಕಿಯ ಸಹಾಯಕ್ಕೆಂದು ನಿಯುಕ್ತಿಗೊಂಡವರು  ಕಾರುಗಳ ಉತ್ಪಾದನೆಯಲ್ಲಿ ತೊಡಗಿದ್ದ ಶುಭೇಂದು ಶರ್ಮಾ.  ಅವರ ಕಣ್ಣೆದುರೇ ಎರಡೂವರೆ ಎಕರೆಯಲ್ಲಿ 30 ಸಾವಿರ ಗಿಡಗಳು ತಲೆ ಎತ್ತಿದವು (ನಾನಿದನ್ನು ಕಣ್ಣಾರೆ ನೋಡಿದ್ದೇನೆ).
ಶರ್ಮಾ ತನ್ನ ಎಂಜಿನಿಯರಿಂಗ್‌ ವೃತ್ತಿಯನ್ನು ತೊರೆದು ಈ ಬಗೆಯ ಅರಣ್ಯಗಳನ್ನು ಬೆಳೆಸಲೆಂದೇ ಪೂರ್ಣಾವಧಿ ಮೀಸಲಿಟ್ಟಿದ್ದಾರೆ. ಇಂದು ಭಾರತದ ಹತ್ತಾರು ನಗರಗಳಲ್ಲಿ ಮತ್ತು ಪಶ್ಚಿಮದ ಹತ್ತಾರು ರಾಷ್ಟ್ರಗಳಲ್ಲಿ ಶುಭೇಂದು ಶರ್ಮಾ ನಿರ್ಮಿಸಿದ ಮಿಯಾವಾಕಿ ಅರಣ್ಯಗಳು ತಲೆ ಎತ್ತಿವೆ.
ಅವರ ಅನೇಕ ಉಪನ್ಯಾಸಗಳು ಯೂಟ್ಯೂಬ್‌ನಲ್ಲಿ ನೋಡಸಿಗುತ್ತವೆ. ತುರ್ತಾಗಿ ಅರಣ್ಯ ಬೆಳೆಸುವ ಪ್ರಾಥಮಿಕ ಮಾಹಿತಿ ನೀಡುವ ಅವರ ಟೆಡ್‌ ಉಪನ್ಯಾಸದ ಲಿಂಕ್‌ ಇಲ್ಲಿದೆ: 
ನೋಡಿ.  ವಿಡಿಯೊದ ಕನ್ನಡದ ಡಬ್ಬಿಂಗ್‌ ಸಾಧ್ಯವಿದೆಯೊ ನೋಡಿ.   ಇತರರೊಂದಿಗೆ ಹಂಚಿಕೊಳ್ಳಿ. ವಿಶೇಷವಾಗಿ ಶಾಲಾ ಶಿಕ್ಷಕರು ಮಕ್ಕಳ ಜೊತೆ ಕೈಜೋಡಿಸಿ ಇಂಥ ಅರಣ್ಯಗಳನ್ನು ನಿರ್ಮಿಸಬಹುದು.  ನಾವು ಬಿಸಿಪ್ರಳಯದ ತುರ್ತು ಸ್ಥಿತಿಯ ಕಡೆ ಹೊರಳುತ್ತಿದ್ದೇವೆ. ಮಳೆಗಾಲ ಬರುವವರೆಗೆ ಕಾಯುತ್ತ ಕೂರಬೇಡಿ. ಈಗಲೇ ಬೀಜ ಸಂಗ್ರಹಣೆಗೆ, ಸೂಕ್ತ ಸಸ್ಯಗಳ ಪತ್ತೆಗೆ ತೊಡಗಿಕೊಳ್ಳಿ.



No comments:

Post a Comment