ಬರಹ: ಕೂಡಂಡ ರವಿ, ಹೊದ್ದೂರು.
ಮೊ; ೮೩೧೦೧೩೦೮೮೭.
ನಮ್ಮಲ್ಲಿ ಹಲವಾರು ವಿಧದ ಮಣ್ಣುಗಳಿವೆ. ಇವುಗಳನ್ನು ಅದರ ಬಣ್ಣ, ಫಲವತ್ತತೆಗೆ ಅನುಗುಣವಾಗಿ ವರ್ಗಿಕರಿಸಲಾಗಿದೆ. ಬೇಸಾಯದಲ್ಲಿ ಮಣ್ಣಿನ ಫಲವತ್ತತೆಗೆ ಅಧಿಕ ಮಹತ್ವವಿದೆ. ಆದರೆ, ರೈತರು ಮಣ್ಣಿನ ವಿಚಾರ ಅರಿಯದೇ ಮನಬಂದಂತೆ ರಾಸಾಯನಿಕ ಗೊಬ್ಬರ, ಪೀಡೆನಾಶಕ, ಕಳೆ ನಾಶಕ ಬಳಸಿ ಅದರ ಫಲವತ್ತತೆಯನ್ನು ನಾಶ ಮಾಡುತ್ತಿರುವರು. ನೈಸರ್ಗಿಕ ವಿಪತ್ತುಗಳು ಸಹಾ ಮಣ್ಣಿನ ಸಾರವನ್ನು ಕಡಿಮೆ-ಹೆಚ್ಚು ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.
ಮಣ್ಣು ಸತ್ವಯುತವಾಗಿರಲು ಅದರಲ್ಲಿರುವ “ಸಾವಯವ ಅಂಶ”ಗಳೇ ಮೂಲ ಕಾರಣ. ಈ ಅಂಶವು ಎಂತಹಾ ಸಮಸ್ಯೆಯಾತ್ಮಕ ಮಣ್ಣನ್ನು ಫಲಭರಿತವನ್ನಾಗಿಸುತ್ತದೆ. ಸಾವಯವ ವಸ್ತುಗಳು ನಮ್ಮ ಹೊಲ, ಗದ್ದೆ, ತೋಟಗಳನ್ನು ಸುಂದರವಾಗಿಸಲು ಸಹಕರಿಸುತ್ತದೆ. ಅಂತಹ ಮಾಂತ್ರಿಕ ಶಕ್ತಿ ಅದಕ್ಕಿದೆ. ಮಣ್ಣಿಗೆ ಪೂರಕವಾಗಿ ಬೆರೆಯುವಂತಹ-ಮಣ್ಣಿನಲ್ಲಿ ಕರಗುವಂತಹ ಸಸ್ಯ-ಪ್ರಾಣಿಜನ್ಯ ವಸ್ತುಗಳಿಂದ ಇವು ಲಭ್ಯ.
ನೈಸರ್ಗಿಕ ಸ್ಪಂಜ್ !
ಮರಳು ಕಣಗಳನ್ನು ಹೆಚ್ಚಾಗಿ ಹೊಂದಿರುವ ಮರಳು ಮಣ್ಣು ಕೃಷಿಗೆ ಸವಾಲು. ಮರಳು ಕಣಗಳು ಸಾಕಷ್ಟು ದೊಡ್ಡದಾಗಿರುತ್ತವೆ. ಇವುಗಳ ಮದ್ಯೆ ಸಾಕಷ್ಟು ಅಂತರವಿರುವಿರುವುದರಿಂದ ಅದರಲ್ಲಿ ನೀರು ವೇಗವಾಗಿ, ಸಲೀಸಾಗಿ ಹರಿದು ಹೋಗುತ್ತದೆ. ನೀರಿನ ಅಂಶ ಅದರಲ್ಲಿ ಕಡಿಮೆ ಕಡಿಮೆ ಇರುವ ಕಾರಣ ಅಂತಹ ಮಣ್ಣು ಬಲು ಬೇಗನೇ ಗಟ್ಟಿಯಾಗುತ್ತದೆ. ಇವುಗಳು ನೀರನ್ನು ಹಿಡಿದಿಟ್ಟು ಕೊಳ್ಳಲಾರವು. ಪರಿಣಾಮ ಇಂತಹ ಮಣ್ಣಿಗೆ ಪದೇ ಪದೇ ನೀರನ್ನು ನೀಡಬೇಕಾಗುತ್ತದೆ. ಮರಳು ಮಣ್ಣಿಗೆ ಸಾವಯುವ ಅಂಶವನ್ನು ಹಾಕಿದಾಗ ಅವು ನೀರನ್ನು ಹಿಡಿದಿಟ್ಟು ಕೊಂಡು ಗಿಡಗಳಿಗೆ ಪೂರೈಸುತ್ತದೆ. ಅದು ನೈಸರ್ಗಿಕ ಸ್ಪಂಜಿನಂತೆ ಕೆಲಸ ಮಾಡುತ್ತದೆ. ಇವು ಬೇಸಿಗೆ ಮತ್ತು ಬರಗಾಲದಲ್ಲಿ ಗಿಡಗಳಿಗೆ ನೀರನ್ನು ಒದಗಿಸಲು ಸಹಕಾರಿ. ಇದರಿಂದ ಗಿಡಗಳಿಗೆ ಬಗೆಬಗೆಯ ಪೋಷಕಾಂಶಗಳು ವರ್ಷದ ಎಲ್ಲಾ ಅವಧಿಯಲ್ಲಿ ಲಭ್ಯವಾಗುವಂತೆ ಮಾಡುತ್ತವೆ. ಮಣ್ಣಿನಲ್ಲಿ ಕರಗುವ ಸಾವಯವ ವಸ್ತುಗಳು ಪರಸ್ಪರ ಬೆರೆಯುತ್ತಾ ಮಣ್ಣು ಸವಕಳಿಯಾಗುವುದನ್ನು ನಿಯಂತ್ರಿಸುತ್ತವೆ. ಇಲ್ಲ ತಪ್ಪಿಸುತ್ತವೆ.
ನೆರಳು ಅನಗತ್ಯ
ಜೇಡಿ ಮಣ್ಣಿನಲ್ಲಿ ಕಣಗಳು ಸಾಕಷ್ಟು ಒತ್ತಗಿರುತ್ತವೆ. ಇವುಗಳು ಒಂದಕ್ಕೊಂದು ಬೆರೆತಿರುತ್ತವೆ. ಆದರೆ, ಇವುಗಳ ನಡುವೆ ಗಾಳಿಯಾಡುವುದು ಕಷ್ಟ. ಇಂತಹ ಮಣ್ಣಿಗೆ ಸಾವಯುವ ವಸ್ತುಗಳನ್ನು ಬೆರೆಸಿದಾಗ ಆ ಮಣ್ಣಿನಲ್ಲಿ ಸಲೀಸಾಗಿ ಗಾಳಿಯಾಡುತ್ತವೆ. ಬೇರುಗಳಿಗೆ ಧಾರಾಳವಾಗಿ ಗಾಳಿ ಲಭ್ಯವಾಗಿ ಸಸ್ಯಗಳು ಚೆನ್ನಾಗಿ ಬೆಳೆಯಲು ಅನುವಾಗುತ್ತದೆ. ಸಾವಯವ ವಸ್ತು ಮಣ್ಣಿನಲ್ಲಿ ಬೆರೆಯುವುದರಿಂದ ಮಣ್ಣಿನ ಕಣ-ಕಣಗಳ ಮಧ್ಯೆ ಜಾಗ ದೊರೆಯುತ್ತದೆ. ಇದರ ಮೂಲಕ ಗಿಡಗಳ ಬೇರುಗಳು ಸುಲಭವಾಗಿ ಬೆಳೆದು ಆಳಕ್ಕೆ ಇಳಿಯುತ್ತವೆ. ಪರಿಣಾಮ ಮಣ್ಣು ಬೇಗನೆ ಗಟ್ಟಿಯಾಗುವುದು ತಪ್ಪುತ್ತದೆ. ಈ ವಿಚಾರವನ್ನು ಅರಿತ ನಮ್ಮ ಹಿರಿಯರು ಭೂಮಿಗೆ ಸಾವಯುವ ಗೊಬ್ಬರವನ್ನು(ಕೊಟ್ಟಿಗೆ ಗೊಬ್ಬರ) ಧಾರಾಳವಾಗಿ ಬಳಸುತ್ತಿದ್ದರು. ಅದರ ಪರಿಣಾಮ ಆ ಕಾಲದಲ್ಲಿ ಧಾರಾಳ ಫಸಲು ದೊರೆಯುತ್ತಿತ್ತು. ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣು ನೀರನ್ನು ಹಿಡಿದಿಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಪರಿಣಾಮ ಬೇಸಿಗೆಯಲ್ಲಿ ಗಿಡಗಳು ಬಾಡಿ ಸಾಯುತ್ತದೆ. ಸಾವಯುವ ಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಗಿಡಗಳಿಗೆ ನೆರಳು ಕೊಡುವ ಅಗತ್ಯವಿಲ್ಲ !
ಮರಗಳು ಅತ್ಯಗತ್ಯ
ಮಣ್ಣಿನಲ್ಲಿ ಸಾವಯವ ಅಂಶಗಳು ಬೆರೆತಾಗ, ಮಣ್ಣಿನ ಕಣ-ಕಣಗಳನ್ನು ಬೇರ್ಪಡಿಸುತ್ತವೆ. ಮಣ್ಣಿಗೆ ಉಪಯುಕ್ತ ಜೀವಾಣುಗಳಾದ ಎರೆಹುಳಗಳ ಚಟುವಟಿಕೆ ಹೆಚ್ಚಾಗುತ್ತದೆ. ಇದಕ್ಕಾಗಿ ತೋಟಗಳಲ್ಲಿ ಅಧಿಕ ಮರಗಳಿರುವುದು ಅಗತ್ಯ. ಈ ಮರಗಳಿಂದ ಉದುರುವ ಎಲೆಗಳಿಂದ ಸಾವಯುವ ಗೊಬ್ಬರವು ಗಿಡಗಳಿಗೆ ದೊರೆಯತ್ತದೆ. ಎರೆಹುಳಗಳ ಚಟುವಟಿಕೆ ಹೆಚ್ಚಾದಷ್ಟು ಮಣ್ಣು ಸಡಿಲವಾಗುತ್ತದೆ. ಎರೆಹುಳಗಳು ಮಣ್ಣಿನಲ್ಲಿ ರಂಧ್ರಗಳನ್ನು ಮಾಡುವುದರಿಂದ ಆ ಮೂಲಕ ನೀರು ಭೂಮಿಯೊಳಕ್ಕೆ ಸುಲಭವಾಗಿ ಸೇರುತ್ತದೆ. ಇದು ಭೂಮಿಗೆ ಬಿದ್ದ ಎಲೆಗಳ ಕೊಳೆಯುವಿಕೆಗೆ ಸಹಕಾರಿ. ಇವುಗಳು ಮಣ್ಣಿನಲ್ಲಿ ಸೂಕ್ಮಾಣು ಜೀವಿಗಳ ಸೃಷ್ಟಿಗೆ ನೆರವಾಗುತ್ತದೆ. ಇವುಗಳು ಸಸ್ಯಗಳಿಗೆ ಬೇಕಾಗುವ ಎಲ್ಲಾ ಬಗೆಯ ಪೋಷಕಾಂಶಗಳನ್ನು ನೀಡುತ್ತವೆ.
ಸಾವಯವ ಗೊಬ್ಬರದಿಂದ ಲಾಭ
ಆದರೆ, ರಾಸಾಯನಿಕ ಗೊಬ್ಬರಗಳು ಕೇವಲ ನಿಗದಿತ ಪೋಷಕಾಂಶಗಳನ್ನು ಮಾತ್ರ ನೀಡುತ್ತವೆ. ಇಂತಹ ಜೀವಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಇವು ಹಲವಾರು ಸಸ್ಯ ರೋಗಗಳನ್ನು ನಿಯಂತ್ರಿಸುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಪರಿಣಾಮ ನಮ್ಮ ತೋಟದ ಸಸ್ಯಗಳು ಆರೋಗ್ಯಯುತವಾಗಿ ಬೆಳೆಯುತ್ತವೆ. ಇದರಿಂದ ಸರಾಸರಿ ಫಸಲು ನಿರೀಕ್ಷಿಸಿಸುವ ಎಲ್ಲಾ ಬೆಳೆಗಾರರು ಎಲ್ಲಾ ಬೆಳೆಗಳಿಗೂ, ಎಲ್ಲಾ ಕಾಲಕ್ಕೂ ಸಾವಯವ ಗೊಬ್ಬರಗಳನ್ನೇ ಬಳಸಬೇಕು. ಎಲ್ಲರೂ ಸಾವಯವ ಗೊಬ್ಬರ ಬಳಸುವುದನ್ನು ಪ್ರೋತ್ಸಾಹಿಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಹಾಗಾದಲ್ಲಿ ಮಾತ್ರ ಕೃಷಿ ಲಾಭದಾಯಕವಾದೀತು.
No comments:
Post a Comment