Monday, 29 July 2024

ಸಾವಯವ ರಹಿತ ಮಣ್ಣು ಸತ್ವಹೀನ !

ಬರಹ: ಕೂಡಂಡ ರವಿ, ಹೊದ್ದೂರು. 

ಮೊ; ೮೩೧೦೧೩೦೮೮೭. 



ನಮ್ಮಲ್ಲಿ ಹಲವಾರು ವಿಧದ ಮಣ್ಣುಗಳಿವೆ. ಇವುಗಳನ್ನು ಅದರ ಬಣ್ಣ, ಫಲವತ್ತತೆಗೆ ಅನುಗುಣವಾಗಿ ವರ್ಗಿಕರಿಸಲಾಗಿದೆ. ಬೇಸಾಯದಲ್ಲಿ ಮಣ್ಣಿನ ಫಲವತ್ತತೆಗೆ ಅಧಿಕ ಮಹತ್ವವಿದೆ. ಆದರೆ, ರೈತರು ಮಣ್ಣಿನ ವಿಚಾರ ಅರಿಯದೇ ಮನಬಂದಂತೆ ರಾಸಾಯನಿಕ ಗೊಬ್ಬರ, ಪೀಡೆನಾಶಕ, ಕಳೆ ನಾಶಕ ಬಳಸಿ ಅದರ ಫಲವತ್ತತೆಯನ್ನು ನಾಶ ಮಾಡುತ್ತಿರುವರು. ನೈಸರ್ಗಿಕ ವಿಪತ್ತುಗಳು ಸಹಾ ಮಣ್ಣಿನ ಸಾರವನ್ನು ಕಡಿಮೆ-ಹೆಚ್ಚು ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. 

 ಮಣ್ಣು ಸತ್ವಯುತವಾಗಿರಲು ಅದರಲ್ಲಿರುವ “ಸಾವಯವ ಅಂಶ”ಗಳೇ ಮೂಲ ಕಾರಣ. ಈ ಅಂಶವು ಎಂತಹಾ ಸಮಸ್ಯೆಯಾತ್ಮಕ ಮಣ್ಣನ್ನು ಫಲಭರಿತವನ್ನಾಗಿಸುತ್ತದೆ. ಸಾವಯವ ವಸ್ತುಗಳು ನಮ್ಮ ಹೊಲ, ಗದ್ದೆ, ತೋಟಗಳನ್ನು ಸುಂದರವಾಗಿಸಲು ಸಹಕರಿಸುತ್ತದೆ. ಅಂತಹ ಮಾಂತ್ರಿಕ ಶಕ್ತಿ ಅದಕ್ಕಿದೆ. ಮಣ್ಣಿಗೆ ಪೂರಕವಾಗಿ ಬೆರೆಯುವಂತಹ-ಮಣ್ಣಿನಲ್ಲಿ ಕರಗುವಂತಹ ಸಸ್ಯ-ಪ್ರಾಣಿಜನ್ಯ ವಸ್ತುಗಳಿಂದ ಇವು ಲಭ್ಯ. 

ನೈಸರ್ಗಿಕ ಸ್ಪಂಜ್ !

ಮರಳು ಕಣಗಳನ್ನು ಹೆಚ್ಚಾಗಿ ಹೊಂದಿರುವ ಮರಳು ಮಣ್ಣು ಕೃಷಿಗೆ ಸವಾಲು. ಮರಳು ಕಣಗಳು ಸಾಕಷ್ಟು ದೊಡ್ಡದಾಗಿರುತ್ತವೆ. ಇವುಗಳ ಮದ್ಯೆ ಸಾಕಷ್ಟು ಅಂತರವಿರುವಿರುವುದರಿಂದ ಅದರಲ್ಲಿ ನೀರು ವೇಗವಾಗಿ, ಸಲೀಸಾಗಿ ಹರಿದು ಹೋಗುತ್ತದೆ. ನೀರಿನ ಅಂಶ ಅದರಲ್ಲಿ ಕಡಿಮೆ ಕಡಿಮೆ ಇರುವ ಕಾರಣ ಅಂತಹ ಮಣ್ಣು ಬಲು ಬೇಗನೇ ಗಟ್ಟಿಯಾಗುತ್ತದೆ. ಇವುಗಳು ನೀರನ್ನು ಹಿಡಿದಿಟ್ಟು ಕೊಳ್ಳಲಾರವು. ಪರಿಣಾಮ ಇಂತಹ ಮಣ್ಣಿಗೆ ಪದೇ ಪದೇ ನೀರನ್ನು ನೀಡಬೇಕಾಗುತ್ತದೆ. ಮರಳು ಮಣ್ಣಿಗೆ ಸಾವಯುವ ಅಂಶವನ್ನು ಹಾಕಿದಾಗ ಅವು ನೀರನ್ನು ಹಿಡಿದಿಟ್ಟು ಕೊಂಡು ಗಿಡಗಳಿಗೆ ಪೂರೈಸುತ್ತದೆ. ಅದು ನೈಸರ್ಗಿಕ ಸ್ಪಂಜಿನಂತೆ ಕೆಲಸ ಮಾಡುತ್ತದೆ. ಇವು ಬೇಸಿಗೆ ಮತ್ತು ಬರಗಾಲದಲ್ಲಿ ಗಿಡಗಳಿಗೆ ನೀರನ್ನು ಒದಗಿಸಲು ಸಹಕಾರಿ. ಇದರಿಂದ ಗಿಡಗಳಿಗೆ ಬಗೆಬಗೆಯ ಪೋಷಕಾಂಶಗಳು ವರ್ಷದ ಎಲ್ಲಾ ಅವಧಿಯಲ್ಲಿ ಲಭ್ಯವಾಗುವಂತೆ ಮಾಡುತ್ತವೆ. ಮಣ್ಣಿನಲ್ಲಿ ಕರಗುವ ಸಾವಯವ ವಸ್ತುಗಳು ಪರಸ್ಪರ ಬೆರೆಯುತ್ತಾ ಮಣ್ಣು ಸವಕಳಿಯಾಗುವುದನ್ನು ನಿಯಂತ್ರಿಸುತ್ತವೆ. ಇಲ್ಲ ತಪ್ಪಿಸುತ್ತವೆ. 

 ನೆರಳು ಅನಗತ್ಯ

ಜೇಡಿ ಮಣ್ಣಿನಲ್ಲಿ ಕಣಗಳು ಸಾಕಷ್ಟು ಒತ್ತಗಿರುತ್ತವೆ. ಇವುಗಳು ಒಂದಕ್ಕೊಂದು ಬೆರೆತಿರುತ್ತವೆ. ಆದರೆ, ಇವುಗಳ ನಡುವೆ ಗಾಳಿಯಾಡುವುದು ಕಷ್ಟ. ಇಂತಹ ಮಣ್ಣಿಗೆ ಸಾವಯುವ ವಸ್ತುಗಳನ್ನು ಬೆರೆಸಿದಾಗ ಆ ಮಣ್ಣಿನಲ್ಲಿ ಸಲೀಸಾಗಿ ಗಾಳಿಯಾಡುತ್ತವೆ. ಬೇರುಗಳಿಗೆ ಧಾರಾಳವಾಗಿ ಗಾಳಿ ಲಭ್ಯವಾಗಿ ಸಸ್ಯಗಳು ಚೆನ್ನಾಗಿ ಬೆಳೆಯಲು ಅನುವಾಗುತ್ತದೆ. ಸಾವಯವ ವಸ್ತು ಮಣ್ಣಿನಲ್ಲಿ ಬೆರೆಯುವುದರಿಂದ ಮಣ್ಣಿನ ಕಣ-ಕಣಗಳ ಮಧ್ಯೆ ಜಾಗ ದೊರೆಯುತ್ತದೆ. ಇದರ ಮೂಲಕ ಗಿಡಗಳ ಬೇರುಗಳು ಸುಲಭವಾಗಿ ಬೆಳೆದು ಆಳಕ್ಕೆ ಇಳಿಯುತ್ತವೆ. ಪರಿಣಾಮ ಮಣ್ಣು ಬೇಗನೆ ಗಟ್ಟಿಯಾಗುವುದು ತಪ್ಪುತ್ತದೆ. ಈ ವಿಚಾರವನ್ನು ಅರಿತ ನಮ್ಮ ಹಿರಿಯರು ಭೂಮಿಗೆ ಸಾವಯುವ ಗೊಬ್ಬರವನ್ನು(ಕೊಟ್ಟಿಗೆ ಗೊಬ್ಬರ) ಧಾರಾಳವಾಗಿ ಬಳಸುತ್ತಿದ್ದರು. ಅದರ ಪರಿಣಾಮ ಆ ಕಾಲದಲ್ಲಿ ಧಾರಾಳ ಫಸಲು ದೊರೆಯುತ್ತಿತ್ತು. ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣು ನೀರನ್ನು ಹಿಡಿದಿಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಪರಿಣಾಮ ಬೇಸಿಗೆಯಲ್ಲಿ ಗಿಡಗಳು ಬಾಡಿ ಸಾಯುತ್ತದೆ. ಸಾವಯುವ ಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಗಿಡಗಳಿಗೆ ನೆರಳು ಕೊಡುವ ಅಗತ್ಯವಿಲ್ಲ !

ಮರಗಳು ಅತ್ಯಗತ್ಯ 

 ಮಣ್ಣಿನಲ್ಲಿ ಸಾವಯವ ಅಂಶಗಳು ಬೆರೆತಾಗ, ಮಣ್ಣಿನ ಕಣ-ಕಣಗಳನ್ನು ಬೇರ್ಪಡಿಸುತ್ತವೆ. ಮಣ್ಣಿಗೆ ಉಪಯುಕ್ತ ಜೀವಾಣುಗಳಾದ ಎರೆಹುಳಗಳ ಚಟುವಟಿಕೆ ಹೆಚ್ಚಾಗುತ್ತದೆ. ಇದಕ್ಕಾಗಿ ತೋಟಗಳಲ್ಲಿ ಅಧಿಕ ಮರಗಳಿರುವುದು ಅಗತ್ಯ. ಈ ಮರಗಳಿಂದ ಉದುರುವ ಎಲೆಗಳಿಂದ ಸಾವಯುವ ಗೊಬ್ಬರವು ಗಿಡಗಳಿಗೆ ದೊರೆಯತ್ತದೆ. ಎರೆಹುಳಗಳ ಚಟುವಟಿಕೆ ಹೆಚ್ಚಾದಷ್ಟು ಮಣ್ಣು ಸಡಿಲವಾಗುತ್ತದೆ. ಎರೆಹುಳಗಳು ಮಣ್ಣಿನಲ್ಲಿ ರಂಧ್ರಗಳನ್ನು ಮಾಡುವುದರಿಂದ ಆ ಮೂಲಕ ನೀರು ಭೂಮಿಯೊಳಕ್ಕೆ ಸುಲಭವಾಗಿ ಸೇರುತ್ತದೆ. ಇದು ಭೂಮಿಗೆ ಬಿದ್ದ ಎಲೆಗಳ ಕೊಳೆಯುವಿಕೆಗೆ ಸಹಕಾರಿ. ಇವುಗಳು ಮಣ್ಣಿನಲ್ಲಿ ಸೂಕ್ಮಾಣು ಜೀವಿಗಳ ಸೃಷ್ಟಿಗೆ ನೆರವಾಗುತ್ತದೆ. ಇವುಗಳು ಸಸ್ಯಗಳಿಗೆ ಬೇಕಾಗುವ  ಎಲ್ಲಾ ಬಗೆಯ ಪೋಷಕಾಂಶಗಳನ್ನು ನೀಡುತ್ತವೆ.

ಸಾವಯವ ಗೊಬ್ಬರದಿಂದ ಲಾಭ

  ಆದರೆ, ರಾಸಾಯನಿಕ ಗೊಬ್ಬರಗಳು ಕೇವಲ ನಿಗದಿತ ಪೋಷಕಾಂಶಗಳನ್ನು ಮಾತ್ರ ನೀಡುತ್ತವೆ. ಇಂತಹ ಜೀವಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಇವು ಹಲವಾರು ಸಸ್ಯ ರೋಗಗಳನ್ನು ನಿಯಂತ್ರಿಸುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಪರಿಣಾಮ ನಮ್ಮ ತೋಟದ ಸಸ್ಯಗಳು ಆರೋಗ್ಯಯುತವಾಗಿ ಬೆಳೆಯುತ್ತವೆ. ಇದರಿಂದ ಸರಾಸರಿ ಫಸಲು ನಿರೀಕ್ಷಿಸಿಸುವ ಎಲ್ಲಾ ಬೆಳೆಗಾರರು ಎಲ್ಲಾ ಬೆಳೆಗಳಿಗೂ, ಎಲ್ಲಾ ಕಾಲಕ್ಕೂ ಸಾವಯವ ಗೊಬ್ಬರಗಳನ್ನೇ ಬಳಸಬೇಕು. ಎಲ್ಲರೂ ಸಾವಯವ ಗೊಬ್ಬರ ಬಳಸುವುದನ್ನು ಪ್ರೋತ್ಸಾಹಿಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಹಾಗಾದಲ್ಲಿ ಮಾತ್ರ ಕೃಷಿ ಲಾಭದಾಯಕವಾದೀತು. 

Sunday, 14 July 2024

ನನ್ನ ಬಾಲ್ಯ ಮತ್ತು ಕೃಷಿ ಜೀವನ

 ಷಣ್ಮುಖ ಕಟ್ಟ

ಅಗ್ರಿಕಲ್ಚರ್ ಡೆಸ್ಕ್ 





ನನ್ನ ಬಾಲ್ಯ ಜೀವನ ತುಂಬಾ ಕಠಿಣವಾಗಿತ್ತು.ನಾನು ಬಡ ಕುಟುಂಬದಿಂದ ಬಂದವನು .ನನ್ನದು ಕಡಬದ ಬಲ್ಪಗ್ರಾಮದ ಕಟ್ಟ ಎಂಬಲ್ಲಿ ಬರುತ್ತದೆ. ನನಗೆ ಆಹಾರ ಬೆಳೆಯಲ್ಲಿ ಆಸಕ್ತಿ ಹುಟ್ಟಲು ತಂದೆ ಮಾಡುತಿದ್ದ ತರಕಾರಿ ಕೃಷಿಯೇ ಕಾರಣ. ತಂದೆ ಮುಖ್ಯವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ ತರಕಾರಿ ಕೃಷಿ ಮಾಡುತ್ತಿದ್ದರು . ತಂದೆ ಮುಖ್ಯವಾಗಿ 1970 ರಿಂದ ತರಕಾರಿ ಕೃಷಿ ಮಾಡುತ್ತಿದ್ದರು .ಮುಖ್ಯ ವಾಗಿ ಬದನೆ ಒಂದೇ 4000  ಕೆಜಿ ಆಗುತಿತ್ತು . ಆವಾಗ ಬದನೆ ಕೆಜಿ ಗೆ ಇದ್ದದ್ದು 5 ರುಪಾಯೀ .ಆಕಾಲದಲ್ಲಿ ನಮ್ಮ ಊರಲ್ಲಿ ಮುಖ್ಯ ವಾಗಿ ತರಕಾರಿ ಕೃಷಿ ಮಾಡುತಿದ್ದದು ತಂದೆಯೆ.ತಂದೆ ಮುಖ್ಯವಾಗಿ ಮಳೆಗಾಲದಲ್ಲಿ ಅಲಸಂಡೆ, ಹಾಗಲಕಾಯಿ , ಹೀರೆಕಾಯಿ ,ಮುಳ್ಳುಸೌತೆ ಮಾಡುತ್ತಿದ್ದರು .ನಾನು ಕೂಡ ಶಾಲೆಗೆ ಹೋಗುತ್ತಾ ತಂದೆಗೆ ತರಕಾರಿ ಕೃಷಿಯಲ್ಲಿ ಸಹಕರಿಸುತಿದ್ದೆನು .ತಂದೆ ಮುಖ್ಯ ವಾಗಿ ಕೆಮಿಕಲ್ ಮತ್ತು ಸಾವಯವ ಕೃಷಿ ಮಾಡುತಿದ್ದರು .ತಂದೆ ಬೆಳಿಗ್ಗೆ ತರಕಾರಿ ಕೊಯಿವ ಸಮಯದಲ್ಲಿ ಸಹಕರಿಸುತಿದ್ದೆನು .ಬೆಳಿಗ್ಗೆ ಚಳಿಗೆ ತರಕಾರಿ ಕೊಯ್ಯವುದು ಎಂದರೆ ಮಜವೇ ಬೇರೆ .ತಂದೆ ಮುಖ್ಯವಾಗಿ ಚಳಿಗಾಲದ ಕೃಷಿಯಲ್ಲಿ ಬದನೆ ,ಸಾಂಬಾರು ಸೌತೆ ಮಾಡುತಿದ್ದರು .ನಮ್ಮ ಬದನೆ ಎಂದರೆ ಎಲ್ಲಕಡೆ ಫೇಮಸ್ .ತರಕಾರಿಗೆ ಸೊಪ್ಪು ,ಹಟ್ಟಿಗೊಬ್ಬರ ,ನೀರು ಹಾಯಿಸಲು ನಾವು ಮಕ್ಕಳು ಸಹಕರಿಸುತಿದ್ದೆವು .ಚಳಿಗಾಲದ ಕೃಷಿಯಲ್ಲಿ ತಂದೆಒಟ್ಟಿಗೆ ಪಾಲ್ಗೊಳುದೆಂದರೆ ಎಲ್ಲಿಲ್ಲದ ಖುಷಿ .ಮರುದಿವಸ ತರಕಾರಿ ಕೊಯ್ಯವುದೆಂದರೆ ಹಿಂದಿನ ದಿನದಿಂದಲೇ ಖುಷಿ .ಬೆಳಿಗ್ಗೆ ಬೇಗ ಎದ್ದು ಚಳಿಗೆ ತರಕಾರಿ ಕೊಯ್ಯಲು ರೆಡಿ ಆಗುತಿದ್ದೆನು .ತಂದೆ ತರಕಾರಿ ಕೊಯ್ಯತಾ ಸಾಲಲ್ಲಿ ಇಡುತ್ತಾ ಹೋಗುತಿದ್ದರು ,ನಾನು ಹಿಂದಿನಿಂದ ತರಕಾರಿ ಕೈಯಲ್ಲಿ ಹೆಕ್ಕಿ ಬುಟ್ಟಿಗೆ ಹಾಕುತ್ತಾ ಬರುತಿದ್ದೆನು.ತರಕಾರಿ ತುಂಬಾ ಸಿಕ್ಕಿದರೆ ನನಗೆ ಖುಷಿಯೇ ಖುಷಿ . ಮತ್ತೆ ತಂದೆಯ ತರಕಾರಿ ಕೃಷಿಯೊಟ್ಟಿಗೆ ನನ್ನದು ಒಂದು ತರಕಾರಿ ಸಾಲು .ಅದನ್ನು ನಾನೆ ನೋಡಿಕೊಳ್ಳುತಿದ್ದದು . ಅದರಲ್ಲಿ ಬಂದ ಹಣ ನನಗೆಯೇ .ತಂದೆ ಒಟ್ಟಿಗೆ  ಪೇಟೆಗೆ ತರಕಾರಿ ತಲೆಯಲ್ಲಿ 4 ಕಿಲೋಮೀಟರು ದೂರದ ಬಲ್ಪ ಕ್ಕೆ ಹೊತ್ತುಕೊಂಡು ಹೋಗುತಿದ್ದೆನು .ಶಾಲೆಗೆ ಹೋಗುವಾಗ ತಂದೆ ಪೇಟೆಗೆ ತರಕಾರಿ ,ಹಾಲು ನನ್ನೊಟ್ಟಿಗೆ ಕಳುಹಿಸುತ್ತಿದ್ದರು .ಶಾಲೆಯಲ್ಲಿ ಸಹಪಾಠಿಗಳು ನನ್ನನ್ನು ತಮಾಷೆಗೆ ಬದನೆ ಎಂದು ಕರೆಯುತಿದ್ದರು .ತಂದೆ ಒಟ್ಟಿಗೆ ವಾಹನದಲ್ಲಿ ತರಕಾರಿ ತೆಗೆದು ಕೊಂಡು ಹೋಗುವಾಗ ನಾನು ಹೋಗುತಿದ್ದೆನು . ತರಕಾರಿ ಮಾರಾಟ ಮಾಡಿದ ಲೆಕ್ಕವನ್ನು ಪುಸ್ತಕದಲ್ಲಿ ಬರೆದು ಇಡುತಿದ್ದದ್ದು ನಾನೆ .puc ಗೆ ಹೋಗುವ ಸಂದರ್ಭ ದಲ್ಲಿ ತರಕಾರಿಯಲ್ಲಿ ಪ್ರಯೋಗ ಮಾಡುತಿದ್ದೆನು . ವಿಜ್ಞಾನ ಪುಸ್ತಕದಲ್ಲಿ ಬರುತಿದ್ದ ಹೈಬ್ರಿಡ್ ಹೇಗೆ ಮಾಡುವುದು ಎಂಬುದನ್ನು ಎರಡು ವಿಧದ ಕೆಂಪು ಮತ್ತು ಬಿಳಿ ಬೆಂಡೆಕಾಯಿ ಯಲ್ಲಿ ಪ್ರಯೋಗಮಾಡುತಿದ್ದೆನು .ನನಗೆ puc ಆದ ನಂತರ bsc ಅಗ್ರಿಕಲ್ಚರ್ ಮಾಡಲು ಆಸಕ್ತಿ ಇತ್ತು ಅದು ಸಾಧ್ಯವಾಗಲಿಲ್ಲ. ಒಟ್ಟಾರೆ ನಾವು ಸಣ್ಣದಿರುವಾಗ ಮನೆಯ ಖರ್ಚು ವೆಚ್ಚ ಗಳು ತರಕಾರಿ ಕೃಷಿ ಇಂದಲೇ ನಡೆಯುತಿತ್ತು .ಬೇಸಿಗೆ ರಜೆ ಯಲ್ಲಿ ಗೇರು ಬೀಜ ತೊಟ್ಟಕ್ಕೆ ಗೇರು ಬೀಜ ಹೆಕ್ಕಲು ದಿನಕ್ಕೆ 40 ರೂಪಾಯೇ ಸಂಬಳಕ್ಕೆ ಸೇರಿದ್ದು ಸಹಿ ನೆನಪ್ಪು .ಅದರಲ್ಲಿ ಸಿಕ್ಕಿದ 2000 ರುಪಾಯೀ ಯನ್ನು ಅಡಿಕೆ ತೋಟಕ್ಕೆ ಪೈಪ್ ಹಾಕಲು ತಂದೆಗೆ ಕೊಟ್ಟದ್ದು ಇನ್ನೂ ನೆನಪಿದೆ .ನಾವು ಸಣ್ಣದಿರುವಾಗ ಎಲ್ಲರೂ ಹಳ್ಳಿಯಲ್ಲಿ ಮಲೆನಾಡು ಗಿಡ್ಡ , ದನಕರು ,ಎಮ್ಮೆ ಗಳನ್ನು ಸಾಕುತ್ತಿದ್ದರು .ಅವುಗಳನ್ನು ಮೇಯಲು ಗುಡ್ಡೆಗೆ ಬಿಡುತ್ತಿದ್ದರು .ರಜಾದಿನಗಳಲ್ಲಿ ದನಕರುಗಳನ್ನು ಮೇಯಿಸಲು ಗುಡ್ಡೆ ಗೆ ಹೋಗುತಿದ್ದೆವು . ಅದರಲ್ಲಿ ಸಿಗುವ ಮಜವೇ ಬೇರೆ .ರಜಾದಿನ ಗಲ್ಲಿ ಗುಡ್ಡೆಯಲ್ಲಿ ಸಿಗುವ ಒಣಗಿದ ಸೆಗಣಿಯನ್ನು ಹೆಕ್ಕಿ ತಂದು ತರಕಾರಿ ಗಿಡ , ಅಡಿಕೆ ಗಿಡಗಳಿಗೆ ಹಾಕುತಿದ್ದೆನು .ಈಗ ಹೈಬ್ರಿಡ್ ದನಗಳು ಬಂದು ಗುಡ್ಡೆಗೆ ದನಕರುಗಳನ್ನು ಬಿಡುವವರೇ ಇಲ್ಲ. ಬೇಸರದ ಸಂಗತಿಯೆಂದರೆ ಭಾರತೀಯ ತಳಿ ದನಗಳು ನಾಶವಾಗುತ್ತಿವೆ .ರಜಾದಿನಗಳಲ್ಲಿ ಗುಡ್ಡೆಗೆ ಊರವರೊಟ್ಟಿಗೆ ದನದ ಹಟ್ಟಿಗೆ ಸೊಪ್ಪು ತರಲು ಹೋಗುತಿದ್ದೆವು ಅದರಲ್ಲಿ ಸಿಗುವ ಮಜವೇ ಬೇರೆ .ಇಂದಿನ ಸಣ್ಣ ಮಕ್ಕಳು ಮತ್ತು ಮುಂದಿನ ಪೀಳಿಗೆಯವರು ತುಳುನಾಡಿನ ಸಂಸ್ಕೃತಿಯನ್ನು ನೋಡುವ ಭಾಗ್ಯ ಅವರಿಗಿಲ್ಲ ಎಂಬುದೇ ಬೇಸರದ ಸಂಗತಿ . ಕೊನೆಯದಾಗಿ ಭಾರತೀಯ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸೋಣ  , ವಿಷರಹಿತ ಕೃಷಿ ಮಾಡೋಣ , ಪ್ರಕೃತಿಯನ್ನು ರಕ್ಷಿಸೋಣ , ಭವ್ಯ ಭಾರತವನ್ನು ಕಟ್ಟೋಣ .

ಕಾಳುಮೆಣಸಿನ ಸಸ್ಯ ಅರೋಗ್ಯ ನಿರ್ವಹಣೆಗೆ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಳಕೆಗೆ - ಕೃಷಿ ವಿಜ್ಞಾನ ಕೇಂದ್ರ ಸಲಹೆ

  ಬರಹ: ಕೂಡಂಡ ರವಿ, ಹೊದ್ದೂರು




ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರು ಕಾಳು ಮೆಣಸಿನ ಸಸ್ಯ ಅರೋಗ್ಯ ನಿರ್ವಹಣೆಗೆ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಎಂಬ ಸೂಕ್ಷ್ಮಾಣು ಜೀವಿಗಳÀ ಗೊಬ್ಬರವನ್ನು ಬಳಸಲು ಶಿ¥sóÁರಸ್ಸು ಮಾಡಿರುತ್ತಾರೆ. ಆದ್ದರಿಂದ ಜಿಲ್ಲೆಯ ರೈತರು ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿಯನ್ನು ಮಾಡಿದೆ.  

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಬಳ್ಳೀ ಹಳದಿಯಾಗುವುದನ್ನು ತಪ್ಪಿಸಲು ಮತ್ತು ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆಮಾಡಲು ಸಹಾಯವಾಗುತ್ತದೆ. 

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯ ಪ್ರಾಮುಖ್ಯತೆಯನ್ನು ಪಡೆದಿರುತ್ತವೆÉ. ಪ್ರಸ್ತುತ ಸೂಕ್ಷ್ಮಾಣು ಜೀವಿಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರೆತೆಯಿಂದಾಗಿ ಸೂಕ್ಷ್ಮಾಣು ಜೀವಿಗಳ ಬಳಕೆ ಕಡಿಮೆಯಾಗಿರುತ್ತದೆ. ಈ ಕೊರತೆಯನ್ನು ನೀಗಿಸಲು ಮತ್ತು ಒಂದೇ ರೀತಿಯ ಸೂಕ್ಷ್ಮಾಣು ಜೀವಿಗಳ ಬಳಕೆಯಿಂದ ಉಂಟಾಗುವ ಅಧಿಕ ಖರ್ಚು ಮತ್ತು ಕಡಿಮೆ ಕಾರ್ಯ ಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಬೆಂಗಳೂರುರವರು ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿರುತ್ತಾರೆ. 

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲುವಿನಲ್ಲಿ ಲಭ್ಯವಿದ್ದು ಜಿಲ್ಲೆಯ ರೈತರು ಇದರ ಪ್ರಯೋಜನವನ್ನು ಪಡೆಯಬೇಕಾಗಿ ವಿನಂತಿ.


ಸೂಕ್ಷ್ಮಾಣು ಜೀವಿಗಳ ಸಮೂಹದ ಉಪಯೋಗಗಳು

    • ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್ ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.

    • ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗುತ್ತದೆ. 

    • ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಳಕೆಯಿಂದ ಸಸ್ಯದ ಬೆಳವಣಿಗೆ,ರೋಗ ನಿಯಂತ್ರಣ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. 

    • ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬೀಜೋಪಚಾರ, ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯ ಜೊತೆ ಮಿಶ್ರಣಮಾಡಿ ರೈತರು ಸುಲಭವಾಗಿ ಬಳಸಬಹುದು. 

    • ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷ್ಮಾಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆಯಿಲ್ಲದೆ ರೈತರು ವಿವಿಧ ಬೆಳೆಗಳಿಗೆ ಬಳಸಬಹುದು.

    •  ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇ. 25 ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ.


ಬಳಸುವ ವಿಧಾನ 

    • ಕೊಟ್ಟಿಗೆ ಗೊಬ್ಬರ ಅಥವಾ ಕಹಿಬೇವಿನ ಹಿಂಡಿಗೆ ಸೇರಿಸುವ ವಿಧಾನ: 5 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 500 ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ 2 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 100 ಕೆ.ಜಿ ಕಹಿಬೇವಿನ ಹಿಂಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಕಾಳುಮೆಣಸು ಬೆಳೆಗಳಿಗೆ ಉಪಯೋಗಿಸಬೇಕು. 

    • ಬೆಳೆಗಳಿಗೆ ನೇರವಾಗಿ ಉಪಯೋಗಿಸುವ ವಿಧಾನ: 4 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ, ಒಂದು ಕೆ.ಜಿ ಬೆಲ್ಲ, 10 ಲೀಟರ್ ಗಂಜಳ ಮತ್ತು 10 ಕೆ.ಜಿ ಸಗಣಿಯನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ 12 ಗಂಟೆಗಳ ಕಾಲ ಇಟ್ಟು ಕಾಳುಮೆಣಸಿನ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್‍ನಷ್ಟು) ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ಸುರಿಯಬೇಕು. 


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು

 ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ

ಗೋಣಿಕೊಪ್ಪಲು, ಕೊಡಗು ಜಿಲ್ಲೆ,   ದೂರವಾಣಿ: 08274-295274