ಬರಹ: ಕೂಡಂಡ ರವಿ, ಹೊದ್ದೂರು.
ಬಹುತೇಕ ಮಹಿಳೆಯರಿಗೆ ಕೇಶವೇ ಸೌಂದರ್ಯವರ್ಧನ ಸಾಧನ. ಚಲನಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿಯೂ ಮಹಿಳೆಯರ ನೀಳಕೇಶಕ್ಕೆ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದ ಮಹಿಳೆಯರು ಕೇಶವರ್ಧನೆಗೆ ಹರಸಾಹಸ ಪಡುತ್ತಿದ್ದಾರೆ. ಧನಿಕ ಮಹಿಳೆಯರು ದುಬಾರಿ ಬೆಲೆಯ ಎಣ್ಣೆಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಪ್ರಮಾಣದ ಮಂದಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಅಂತಹವರು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಕರಿಬೇವಿನ ಎಣ್ಣೆಯನ್ನು ಬಳಸಿ ನೋಡಬಹುದು.
ವೈದ್ಯರ ಶಿಫಾರಸ್ಸು
ಕರಿಬೇವಿನ ಎಲೆಗಳು ಕೂದಲಿನ ಆರೈಕೆಯಲ್ಲಿ ಜನಪ್ರಿಯತೆ ಪಡೆದಿದೆ. ಇದರಲ್ಲಿರುವ ಅಮೈನೋ ಆಮ್ಲಗಳು ಈ ಪ್ರಕ್ರಿಯೆಗೆ ಕಾರಣ. ಕರಿಬೇವಿನ ಪೇಸ್ಟನ್ನು ಮೊಸರಿಗೆ ಮಿಶ್ರಮಾಡಿ ತಲೆಗೂದಲ ಮೇಲೆ ನೇರವಾಗಿ ಹಚ್ಚಬಹುದು. ಅರ್ಧ ಘಂಟೆಯ ಬಳಿಕ ಇದನ್ನು ತೊಳೆಯುವುದರಿಂದ ಕೂದಲು ಪುರ್ನಜೀವ ಗೊಳ್ಳುತ್ತದೆ. ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ತೆಂಗಿನೆಣ್ಣೆಗೆ ಇದರ ಸೊಪ್ಪನ್ನು ಹಾಕಿ ೧೦-೧೫ ನಿಮಿಷ ಚೆನ್ನಾಗಿ ಕುದಿಸಿ. ಆರಲು ಬಿಡಿ. ಈ ಎಣ್ಣೆಯನ್ನು ತಲೆ ಮಸಾಜ್ ಮಾಡಲು, ಕೂದಲಿನ ವರ್ಧನೆಗಾಗಿ ನಿರಂತರವಾಗಿ ಬಳಸಬಹುದು. ಇದರ ಬಳಕೆಯಿಂದ ಕೂದಲು ಗಾಡ ಕಪ್ಪು ಬಣ್ಣಕ್ಕೆ ತಿರುಗುವುದು. ಕೂದಲಿನ ಬೇರುಗಳ ಬಲವರ್ಧನೆಯಾಗುವುದು. ಕರಿಬೇವಿನ ಎಲೆಗಳಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಸಮೃದ್ಧವಾಗಿವೆ. ಇವು ಮಾನವನ ದೇಹಕ್ಕೆ ಪ್ರತಿರಕ್ಷೆ ನೀಡುತ್ತವೆ ಎಂದು ವೆಂಕಟರಮಣ ಆರ್ಯವೇದ ಆಸ್ಪತ್ರೆಯ ವೈದ್ಯ ಡಾ.ರಾಧಾಕೃಷ್ಣ ಅಭಿಪ್ರಾಯ.
ಮಾನವನ ಕೂದಲಿಗೆ ನೈಸರ್ಗಿಕ ಬಣ್ಣವನ್ನು ಯಥಾ ರೀತಿಯಲ್ಲಿ ಕಾಪಾಡಲು ಕರಿಬೇವಿನ ಎಲೆಗಳನ್ನು ಬಳಸಬಹುದು. ಇದನ್ನು ನಿರಂತರ-ನಿಯಮಿತವಾಗಿ ಬಳಸಿದಲ್ಲಿ ಕೂದಲ ಬೇರುಗಳ ಬಲವರ್ಧನೆಗೆ ನೆರವಾಗಲಿದೆ. ಇದನ್ನು ನಿರಂತರವಾಗಿ ಬಳಸಿದ್ದಲ್ಲಿ ಕೂದಲಿನ ಉದುರುವಿಕೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಾಣಬರುವುದು.
ಮಧುಮೇಹದ ವಿರೋಧಿ
ಇದು ಮಧುಮೇಹಿ ವಿರೋಧಿ. ಜೀರ್ಣಕ್ರಿಯೆಗೆ ಸಹಕಾರಿ. ಉದರದಲ್ಲಿನ ಹುಳ ನಿಯಂತ್ರಣ, ದೇಹದಲ್ಲಿನ ಮಿತಿ ಮಿರಿದ ಕೊಬ್ಬು ಶೇಖರಣೆ(ಬೊಜ್ಜು) ತಡೆಗೆ ಸಹಕಾರಿ ಎಂದು ಇತ್ತೀಚಿಗಿನ ಸಂಶೋಧನೆಗಳು ಖಾತ್ರಿಪಡಿಸಿವೆ. ಈ ಸೊಪ್ಪನ್ನು ಬೆಳಿಗ್ಗೆ ಅಗಿದು ತಿಂದಲ್ಲಿ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣಕ್ಕೆ ನೆರವು ನೀಡುತ್ತದೆ.
ಮಿತಿಮೀರಿದ ಪಿತ್ತವಿದ್ದಲ್ಲಿ ಮುಂಜಾನೆ ವೇಳೆಯಲ್ಲಿನ ವಾಕರಿಕೆ, ವಾಂತಿಯ ನಿಯಂತ್ರಣಕ್ಕಾಗಿ ಪುದೀನ, ಕೊತ್ತಂಬರಿ ಮತ್ತು ಕರಿಬೇವಿನ ಎಲೆಗಳನ್ನು ಬಳಸಲಾಗುವುದು. ಈ ಎಲೆಗಳನ್ನು ಅರೆದು ಹಸಿ ಶುಂಠಿ ಮೆಂತೆ, ರುಚಿಗೆ ತಕ್ಕ ಉಪ್ಪನ್ನು ಬಳಸಿ ಎರಡು ದಿನಗಳ ಕಾಲ ಆಹಾರದೊಡನೆ ಸೇವಿಸಬೇಕು. ಕರಿಬೇವಿನ ಎಲೆಗಳಲ್ಲಿ ಧಾರಾಳ ಕ್ಯಾಲ್ಸಿಯಂ ಅಂಶವಿರುವುದರಿAದ ಹಿರಿಯರ ಮೂಳೆ ಸವೆತದಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿರಿಸಬಹುದು. ಬೆಂದ ಗಾಯಗಳು, ಮೈಮೇಲೆ ಆದ ಏಟುಗಳಿಗೆ ಕರಿಬೇವಿನ ಎಲೆ, ಅರಶಿನ ಬೆರೆಸಿ, ಪೇಸ್ಟ್ ಮಾಡಿ ಹಚ್ಚಿದಲ್ಲಿ ಶೀಘ್ರ ಗುಣಮುಖರಾಗಬಹುದು. ಕಳೆಗುಂದಿದ ಮುಖದಲ್ಲಿ ತಾಜಾತನ ಮೂಡಿಸಲು, ಮುಖದಲ್ಲಿ ಮೂಡುವ ಮೊಡವೆಗಳ ನಿಯಂತ್ರಣಕ್ಕೆ ಕರಿಬೇವಿನ ಎಲೆ, ಹಸಿ ಅರಸಿನದ ಪೇಸ್ಟ್ನ್ನು ವಾರದ ಕಾಲ ಬಳಸಿ ನಿಯಂತ್ರಿಸಬಹುದು.
ಬೆಳಸಿ ಬಳಸಿ
ದಾಲ್ಚಿನ್ನಿ ಸಿಪ್ಪೆ, ನಿಂಬೆ ರಸ, ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅದನ್ನು ಅರೆದು ಹಚ್ಚಿದಲ್ಲಿ ಕೀಟಗಳ ಕಡಿತದ ನೋವು ಉಪಶಮನವಾಗುವುದು. ಹಸಿವಿನ ಕೊರತೆ, ರುಚಿ ನಷ್ಟದಂತಹ ಸಮಸ್ಯೆಗಳಿಗೆ ಕರಿಬೇವಿನ ಎಲೆಯ ಪುಡಿ, ಜೀರಿಗೆ, ಕಪ್ಪು ಉಪ್ಪನ್ನು ಸೇರಿಸಿ, ಚಿಕಿತ್ಸಕ ಪಾನೀಯ ತಯಾರಿಸಿ ಕುಡಿಯಬೇಕು. ನಿರಂತರವಾಗಿ ಕರಿಬೇವಿನ ಪುಡಿಯನ್ನು ಅಡುಗೆಯಲ್ಲಿ ಬಳಸಿದಲ್ಲಿ ಆರೋಗ್ಯವರ್ಧನೆ ಖಾತರಿ. ಆದರೆ, ರಾಸಾಯನಿಕ, ಕೀಟನಾಶಕ ಮುಕ್ತ ಸೊಪ್ಪನ್ನು ಬಳಸಿ. ಅನುಕೂಲವಾದಲ್ಲಿ ಪ್ರತೀ ಮನೆಯಲ್ಲಿಯೂ ಕರಿಬೇವನ್ನು ನೆಟ್ಟು ಬೆಳಸಿ-ಬಳಸಿ ನೋಡಿ. ಅಧಿಕ ಮಾಹಿತಿಗಾಗಿ ಸಮೀಪದ ಆರ್ಯುವೇದಿಕ್ ವೈದ್ಯರನ್ನು ಸಂಪರ್ಕಿಸಬಹುದು.